ದಾವಣಗೆರೆ: ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ, ಮತ್ತೊಂದು ಹೃದಯಸ್ಪರ್ಶಿ ಕತೆ ‘ಮುದ್ದು ಸೊಸೆ’ಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ.ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್ ನಾಯಕಿಯಾಗಿರುವ, ಮುನಿ ಮತ್ತು ಹರಿಣಿ ಶ್ರೀಕಾಂತ್ ತಾರಾಗಣದ ಈ ಬಹುನಿರೀಕ್ಷಿತ ಏ.14ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.ವೈದ್ಯೆ ಆಗಬೇಕೆಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದಾರ್ಥಿನಿ ವಿದ್ಯಾ; ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಹೇಳುತ್ತದೆ ‘ಮುದ್ದು ಸೊಸೆ’. ಮನೆಮಂದಿಯೆಲ್ಲ ಸೇರಿ ನೋಡಲೇಬೇಕಾದ ಧಾರಾವಾಹಿ. ಪ್ರಬಲ ಸಂಕಲ್ಪ ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ ಕಥಾ ಹಂದರದಿಂದ ‘ ‘ಮುದ್ದು ಸೊಸೆ’ ಪ್ರೇಕ್ಷಕರ ಹೃದಯ ಗೆಲ್ಲಲಿದೆ.ಸಕ್ಕರೆ ನಗರ ಮಂಡ್ಯದಲ್ಲಿ ಚಿತ್ರೀಕರಿಸಲಾಗಿದ್ದು ಹೊನ್ನೆಮಡು ಎಂಬ ಹಳ್ಳಿಯ ಒಂದು ಸಾಮಾನ್ಯ ಕುಟುಂಬದಿಂದ ಬಂದ ವಿದ್ಯಾ, ವೈದ್ಯೆಯಾಗಬೇಕೆಂಬ ಕನಸಿನೊಂದಿಗೆ ಬೆಳೆದ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ, ಹುಲಿಕೆರೆಯ ಶ್ರೀಮಂತ ಕುಟುಂಬದಿಂದ ಬಂದ ಭದ್ರಗೌಡ, ತನ್ನ ತಂದೆ ಶಿವರಾಮೇಗೌಡರ ಆದೇಶಗಳನ್ನು ಪಾಲಿಸುವವನು.ಭದ್ರನ ಪಾಲಿಗೆ ಅಪ್ಪನೇ ದೇವ್ರು, ಅಪ್ಪನೇ ಉತ್ಸವ ಮೂರ್ತಿ. ತನ್ನ ತಂದೆಯ ಗೌರವ ಹೆಚ್ಚಿಸುವುದಕ್ಕಾಗಿ ಯಾವುದೇ ಕೆಲಸ ಮಾಡಬಲ್ಲ, ಕೆಣಕಿದರೆ ಯಾರನ್ನೂ ಬಿಡದ ಭದ್ರ ಮತ್ತು ಶಿವರಾಮೇಗೌಡನ ನಡುವೆ ಯಾರೂ ಮುರಿಯಲಾಗದ ಪ್ರೀತಿಯ ಬಂಧವಿರುತ್ತದೆ.ಯಾರಿಗೂ ಬಗ್ಗದ ಕಠಿಣ ವ್ಯಕ್ತಿತ್ವದ ಜಮೀನ್ದಾರ ಶಿವರಾಮೇಗೌಡರಿಗೆ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಹಾಳಾಗುತ್ತಾರೆ ಎಂಬ ಗಟ್ಟಿಯಾದ ನಂಬಿಕೆ. ಶಿವರಾಮೇಗೌಡರು ತಮ್ಮ ಮಗನಿಗೆ ವಿದ್ಯಾಳನ್ನು ಮದುವೆ ಮಾಡಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ.ವಿದ್ಯಾಳ ತಂದೆ ಚೆಲುವರಾಯನಿಗೂ ಹೆಣ್ಣುಮಕ್ಕಳು ಓದುವುದರ ಬಗ್ಗೆ ವಿರೋಧ ಇರುವುದರಿಂದ ಅವನು ಕೂಡಾ ಈ ಮದುವೆಗೆ ಒಪ್ಪುತ್ತಾನೆ. ತನ್ನ ಕನಸುಗಳ ಬೆನ್ನತ್ತಿರುವ ವಿದ್ಯಾ ಒತ್ತಾಯದಿಂದ ಮದುವೆಯಾಗಬೇಕಾದಾಗ, ಆಕೆ ಪತ್ನಿಯಾಗಿ, ಸೊಸೆಯಾಗಿ ತನ್ನ ಸ್ವಂತ ಬದುಕನ್ನು ಕನಸನ್ನು ನಿಜ ಮಾಡಲು ಹೋರಾಡಬೇಕಾಗುತ್ತದೆ. ವಿದ್ಯಾಳ ಮದುವೆ ಅವಳ ಕನಸುಗಳಿಗೆ ಅಡ್ಡಿಯಾಗುತ್ತದೆಯೇ? ತಂದೆಯ ಆದೇಶಗಳಿಗೆ ತಲೆಬಾಗುವ ಭದ್ರ, ವಿದ್ಯಾಳ ಕನಸುಗಳನ್ನು ಅರಿತಾಗ ತಂದೆಯ ವಿರೋಧ ಕಟ್ಟಿಕೊಂಡು ವಿದ್ಯಾಳನ್ನು ಓದಿಸುವನೇ? ಅವಳ ಮನದ ಒಳಗಿನ ನೋವನ್ನು ಅರ್ಥಮಾಡಿಕೊಳ್ಳುತ್ತಾನೆಯೇ? ಭದ್ರ ಮತ್ತು ವಿದ್ಯಾಳ ದಾಂಪತ್ಯವು ವಿದ್ಯಾಳ ಭವಿಷ್ಯಕ್ಕೆ ಸಹಾಯ ಮಾಡುತ್ತದೆಯೇ?