ದಾವಣಗೆರೆ :ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಮಾಡಿದ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ಹಾಗೂ ಆರೋಪಿಗೆ ಸಹಕರಿಸಿದ ಆರೋಪಿತೆಗೆ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.ದಿ.28/04/2023 ರಂದು 13 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರೋಪಿ ತಿಮೋತಿ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ವಿರುಪಾಪುರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿರುವ ಬಗ್ಗೆ ತಾಯಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಪೊಲೀಸ್ ನಿರೀಕ್ಷಕಿ ಎಂ.ಆರ್ ಚೌಬೆ ತನಿಖೆ ನಡೆಸಿ ಆರೋಪಿ ತಿಮೋತಿ ಮತ್ತು ಆರೋಪಿಗೆ ಸಹಾಯ ಮಾಡಿದ ರೋಜಾ ವಿರುದ್ದ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದಲ್ಲಿ ಎ2-ಆರೋಪಿಯು ಅಪ್ರಾಪ್ತೆಯನ್ನು ಮನೆಯಿಂದ ರೈಲ್ವೆ ಸ್ಷೇಷನ್ಗೆ ಕರೆದುಕೊಂಡು ಆರೋಪಿಯ ಜೊತೆಗೆ ಹೋಗಲು ಸಹಾಯ ಮಾಡಿರುವುದು ಪ್ರಕರಣದ ತನಿಖೆಯಿಂದ, ಸಾಕ್ಷಿದಾರರ ಹೇಳಿಕೆಗಳಿಂದ, ಹಾಗೂ ಇತರೆ ದಾಖಲಾತಿಗಳಿಂದ ಆರೋಪ ದೃಢಪಟ್ಟಿದ್ದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್ಟಿಎಸ್ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಶ್ರೀರಾಮ ನಾರಾಯಣ ಹೆಗಡೆ ಆರೋಪಿ ತಿಮೋತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 35,000/- ರೂ ದಂಡ . ಆರೋಪಿ ರೋಜಾ 2 ವರ್ಷ ಕಾರಾಗೃಹ ಶಿಕ್ಷೆ ಹಾಗೂ 5,000/- ರೂ ದಂಡ ವಿಧಿಸಿದ್ದಾರೆ.ಆರೋಪಿತರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದ್ದರಿಂದ ಬಂಧನದ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಫ್ ಮಾಡಲಾಗಿದೆ.ಆರೋಪಿತರಿಂದ ವಸೂಲುಮಾಡಿದ ದಂಡದ ಒಟ್ಟು ಮೊತ್ತ 40,000/-ರೂಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಸಂತ್ರಸ್ಥೆಗೆ ಸರ್ಕಾರದಿಂದ 5 ಲಕ್ಷ ರೂ ಪರಿಹಾರ ನೀಡುವಂತೆ ತೀರ್ಪು ನೀಡಿದ್ದಾರೆ.