ದಾವಣಗೆರೆ, ಫೆಬ್ರವರಿ.06 ದಾವಣಗೆರೆ ಜಿಲ್ಲೆಯಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಿದ್ದು ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಕಂಡು ಬಂದಿದ್ದು ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪತ್ರಕರ್ತರ ಸಮೂಹ ಹಾಗೂ ಜಿಲ್ಲಾ ವರದಿಗಾರರ ಕೂಟ ಒತ್ತಾಯಿಸಿದೆ.ಪತ್ರಕರ್ತರೆಂದು ಹೇಳಿಕೊಂಡು ಬೆದರಿಕೆ ಹಾಕುವುದು ಮತ್ತು ಇತರೆ ಉದ್ದೇಶಕ್ಕೆ ಒತ್ತಾಯಿಸುವುದು ಕಂಡು ಬಂದಲ್ಲಿ ತಕ್ಷಣ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಅಥವಾ ವಾರ್ತಾ ಇಲಾಖೆಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ತಿಳಿಸಿದ್ದಾರೆ.ಉಪಗ್ರಹ ಆಧಾರಿತ ವಿದ್ಯುನ್ಮಾನ ಸುದ್ದಿವಾಹಿನಿಗಳಲ್ಲಿ ವರದಿಗಾರರಾಗಿ ಕೆಲಸ ಮಾಡುತ್ತಿದ್ದಲ್ಲಿ ಮತ್ತು ಮುದ್ರಣ ಮಾಧ್ಯಮ ಆರ್.ಎನ್.ಐ.ಅನ್ವಯ ನಿಯಮಬದ್ದವಾಗಿ ಹಾಗೂ ಕ್ರಮಬದ್ದವಾಗಿ ಪ್ರಸಾರ ಹೊಂದಿರುವ ಪತ್ರಿಕೆಯ ಸಂಪಾದಕರು,ವರದಿಗಾರರನ್ನು ಮಾಧ್ಯಮ ಪ್ರತಿನಿಧಿಗಳೆಂದು ಗುರುತಿಸಲಾಗುತ್ತದೆ.ಆದರೆ ಸೋಷಿಯಲ್ ಮೀಡಿಯಾವನ್ನು ಅಂದರೆ ಯೂಟ್ಯೂಬ್‍ನ್ನು ಮಾಧ್ಯಮ ಪ್ರತಿನಿಧಿ ಎಂದು ಕರೆಯಲಾಗುವುದಿಲ್ಲ. ಕೆಲವು ವ್ಯಕ್ತಿಗಳು ಜಿಲ್ಲಾಧಿಕಾರಿಗಳ ಹೆಸರು ಮತ್ತು ಪತ್ರಕರ್ತರ ಸಂಘಟನೆಗಳ ಹೆಸರನ್ನೇಳಿ ಬೇಡಿಕೆಗಳನ್ನಿಡುತ್ತಿದ್ದಾರೆ, ಇದಕ್ಕೆ ಕಡಿವಾಣ ಹಾಕಬೇಕೆಂದು ಕಾರ್ಯನಿರತ ಪತ್ರಕರ್ತರ ಒತ್ತಾಯವಾಗಿದ್ದು ಇಂತಹ ನಕಲಿ ಪತ್ರಕರ್ತರು ಕಂಡುಬಂದಲ್ಲಿ ಮಾಹಿತಿ ನೀಡಲು ಕೋರಲಾಗಿದೆ.