ಕಲರ್ಸ್ ಕನ್ನಡದಲ್ಲಿ ವಧು ಮತ್ತು ಯಜಮಾನ ಎರಡು ಹೊಸ ಧಾರಾವಾಹಿ ಆರಂಭ

Spread the love

ಕಲರ್ಸ್ ಕನ್ನಡದಲ್ಲಿ ವಧು ಮತ್ತು ಯಜಮಾನ ಎರಡು ಹೊಸ ಧಾರಾವಾಹಿ ಆರಂಭ ಕಲರ್ಸ್‌ ಕನ್ನಡ ಚಾನೆಲ್‌ನಲ್ಲಿ ‘ವಧು’ ಮತ್ತು ‘ಯಜಮಾನ’ ಹೊಸ ಎರಡು ಧಾರಾವಾಹಿಗಳು ದೈನಿಕ ಜ. 27 ರಿಂದ ಪ್ರಾರಂಭವಾಗಲಿವೆ. ಡಿವೋರ್ಸ್ ಲಾಯರ್ ಮದುವೆ ಕತೆ ‘ವಧು’ ರಾತ್ರಿ 9.30ಕ್ಕೆ. ಕಾಂಟ್ರಾಕ್ಟ್ ಮದುವೆಯ ಕತೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ. ವಧು : ‘ವಧು’ ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಗಂಡ- ಹೆಂಡತಿ ನಡುವೆ ಬಿರುಕು ಮೂಡಿ ವಿಚ್ಛೇದನ ಕೋರಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವರನ್ನು ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ. ಹೀಗಿರುವಾಗ ಒಂದು ಮಹತ್ವದ ಕೇಸು ಎಲ್ಲವನ್ನೂ ತಲೆಕೆಳಗು ಮಾಡುತ್ತದೆ. ಮೋಸ್ಟ್ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಸಾರ್ಥಕ್ ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ಡಿವೋರ್ಸ್ ಕೇಸ್ ಫೈಲ್ ಮಾಡಿದಾಗ ವಧು ಹತ್ತಿರ ಸಹಾಯ ಕೋರಿ ಬರುತ್ತಾನೆ. ಈ ವೇಳೆ ಕತೆ ಕುತೂಹಲಕರ ತಿರುವು (ಟರ್ನ್) ಪಡೆಯುತ್ತದೆ. ಈ ಕೇಸನ್ನು ವಧು ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ ಮತ್ತು ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಕೇಸ್ ಬದಲಾಯಿಸುತ್ತಾ ಅನ್ನುವುದೇ ಕತೆಯನ್ನು ಮುನ್ನೆಡೆಸುವ ಎಳೆ.ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಅಭಿನಹಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ಲಕ್ಷಣ ಧಾರಾವಾಹಿಯ ಅಭಿಷೇಕ್‌ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಲಿದ್ದಾರೆ. ಯಜಮಾನ : ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ. ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯ ಹುಟ್ಟಿಸುತ್ತದೆ.ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ದ ಕತೆಯನ್ನು ಬೆಳೆಸುತ್ತಾ ಹೋಗುವ ತಂತು. ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಅಥವಾ ಅವರ ವ್ಯಕ್ತಿತ್ವದಲ್ಲಿರುವ ಭಿನ್ನತೆಯೇ ಅವರನ್ನು ದೂರಾಗಿಸುತ್ತದೆಯಾ? ಉತ್ತರಕ್ಕೆ ಸಂಚಿಕೆಗಳನ್ನು ಕಾದು ನೋಡಬೇಕು.ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಇಲ್ಲಿದ್ದಾರೆ.

Leave a Reply

Your email address will not be published. Required fields are marked *