ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದ ಹತ್ತಿರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಓಬಳೆಶ್ವರ ಗುಡ್ಡದಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯ ಜ್ವಾಲೆಯು, ಗುಡ್ಡದ ಸಮೀಪದಲ್ಲಿಯೇ ಗ್ರಾಮ ಪಂಚಾಯತ ವತಿಯಿಂದ ನಿರ್ಮಿಸಿರುವ ಕಸ ವಿಲೇವಾರಿ ಘಟಕಕ್ಕೆ ಹೊತ್ತಿಕೊಂಡು ಸ್ವಲ್ಪ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣವೆ ಸ್ಥಳಕ್ಕೆ ಅಗ್ನಿ ಶಾಮಕ ವಾಹನವು ಬಂದಿದ್ದರಿಂದ ಭಾರಿ ಅನಾಹುತ ತಪ್ಪಿದೆ ಎಂದು ಸಾರಥಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಗೋಣಿಬಸಪ್ಪ ಹಳದರ ಪತ್ರಿಕೆಗೆ ತಿಳಿಸಿದರು. ಶ್ರೀ ಆಂಜನೇಯಸ್ವಾಮಿ ಓಬಳೆಶ್ವರ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆಗೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರೈತರ ಹೊಲದಲ್ಲಿ ಬೆಳೆದು ಕಟಾವಿಗೆ ಬಂದಿದ್ದ ತೊಗರಿ, ಅಲಸಂದಿ ಮತ್ತಿತರೆ ಬೆಳೆಗಳು ಅರಣ್ಯ ಇಲಾಖೆಯು ನೆಟ್ಟಿದ್ದ ವಿವಿಧ ಜಾತಿಯ ಅನೇಕ ಗಿಡಗಳು ಅಗ್ನಿಗಾಹುತಿಯಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಸಾರಥಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಆನ್ವೇರಿ ಹೂವಮ್ಮ, ಕಜ್ಜರಿ ಹನುಮಂತಪ್ಪ, ಪೂಜಾರ ಭರಮಪ್ಪ, ಪುಷ್ಪಾ ಹನುಮಂತಪ್ಪ, ರವಿಂದ್ರ ಪಾಟೀಲ, ನಿರಂಜನ ದೀಟೂರು, ಗುತ್ತೂರು ಗ್ರಾಮಾಂತರ ಠಾಣೆಯ ಎಎಸ್ಐ ನಾಗರಾಜ, ಶೇಖರಪ್ಪ, ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವರದಿ ಮೊಹಮ್ಮದ್ ಗೌಸ್.ಸ್ಮಾರ್ಟ್ ನ್ಯೂಸ್ ಕನ್ನಡ ಹರಿಹರ