ಬೆಳಗಾವಿ ಚಳಿಗಾಲ ಅಧಿವೇಶನಕ್ಕಾಗಿ ಎಲ್ಲಾ ಸಿದ್ಧತೆ: ಸಭಾಧ್ಯಕ್ಷ ಯು.ಟಿ. ಖಾದರ್

Spread the love

ಬೆಳಗಾವಿ : ಡಿಸೆಂಬರ್ 8ರಿಂದ ಆರಂಭಗೊಳ್ಳಲಿರುವ ವಿಧಾನಮಂಡಳಿಯ ಚಳಿಗಾಲ ಅಧಿವೇಶನವನ್ನು ಅಚ್ಚುಕಟ್ಟಾಗಿ ನಡೆಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.ಅಧಿವೇಶನಕ್ಕೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ವಿಶೇಷ ಕ್ರಮಗಳನ್ನು ರೂಪಿಸಲಾಗಿದ್ದು, ಪ್ರತಿದಿನ 500 ವಿದ್ಯಾರ್ಥಿಗಳಿಗೆ ಸುಗಮವಾಗಿ ಕಲಾಪ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿದೆ. ಜೊತೆಗೆ, ಸಂಸದೀಯ ವ್ಯವಸ್ಥೆ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವವಿದ್ಯಾನಿಲಯಗಳ 30 ಮಂದಿ ವಿದ್ಯಾರ್ಥಿಗಳಿಗೆ ಇಡೀ ದಿನ ಕಲಾಪ ವೀಕ್ಷಣೆಯ ವ್ಯವಸ್ಥೆ ಮಾಡಲಾಗಿದೆ.ಸಮಾಜದ ಎಲ್ಲಾ ವರ್ಗದ ಜನರಿಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಕ್ರೀಡಾಪಟುಗಳು, ಮಹಿಳೆಯರು, ಕಾರ್ಮಿಕರು, ಪೌರಕಾರ್ಮಿಕರು, ತೃತೀಯಲಿಂಗಿಗಳು ಹೀಗೆ ಎಲ್ಲರಿಗೂ ಕಲಾಪ ವೀಕ್ಷಣೆಗೆ ವಿಶೇಷ ಅವಕಾಶ ನೀಡಲಾಗುವುದು ಎಂದು ಖಾದರ್ ತಿಳಿಸಿದರು.ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡಲಾಗುವುದಾಗಿ ಅವರು ಸ್ಪಷ್ಟಪಡಿಸಿದರು. ಅದೇ ರೀತಿ ಚರ್ಚೆಗೆ ಸಂಬಂಧಿಸಿದ ವಿಷಯಗಳನ್ನು ಬಿ.ಎ.ಸಿ. ಸಭೆಯಲ್ಲಿ ಅಂತಿಮಗೊಳಿಸಲಾಗುವುದೆಂದರು. ಕಳೆದ ಅಧಿವೇಶನದಲ್ಲಿ ಹಾಜರಾತಿ ಪ್ರಮಾಣ ಸುಧಾರಿಸಿದ್ದು, ಅದು ಯಶಸ್ವಿಯಾಗಿದೆ ಎಂದೂ ಖಾದರ್ ಹೇಳಿದರು.

ಸದನ ನಿಯಮಾವಳಿ ಪ್ರಕಾರ ಚರ್ಚೆ: ಸಭಾಪತಿ ಬಸವರಾಜ ಹೊರಟ್ಟಿವಿಧಾನ ಪರಿಷತ್ ಸಭಾಪತಿ

ಬಸವರಾಜ ಹೊರಟ್ಟಿ ಮಾತನಾಡಿ, ಸದನದ ನಿಯಮಾವಳಿಯ ಪ್ರಕಾರ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.ಹಿಂದಿನ ಅಧಿವೇಶನದಲ್ಲಿ ಮಾಡಿದಂತೆ, ಪ್ರತಿಭಟನಾ ಸ್ಥಳಗಳಿಗೆ ಸಚಿವರನ್ನು ಕಳುಹಿಸಿ ಜನರ ಅಹವಾಲು ಸ್ವೀಕರಿಸುವ ಕ್ರಮ ಈ ಬಾರಿಯ ಅಧಿವೇಶನದಲ್ಲೂ ಮುಂದುವರಿಸಲಾಗುತ್ತದೆ ಎಂದರು.ಕಬ್ಬು ಬೆಳೆಗಾರರ ಸಮಸ್ಯೆಯನ್ನು ಸರಕಾರ ಈಗಾಗಲೇ ಪರಿಗಣಿಸಿದ್ದು, ಅದರ ಜೊತೆಗೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗಗಳ ಸಮಸ್ಯೆಗಳನ್ನು ಮುಂಚಿತವಾಗಿ ಚರ್ಚಿಸಲು ಸೂಚನೆ ನೀಡಲಾಗಿದೆ ಎಂದು ಹೊರಟ್ಟಿ ಮಾಹಿತಿ ನೀಡಿದರು.

ವರದಿ : ಅಜ್ಜಯ್ಯ ಜಿ

Leave a Reply

Your email address will not be published. Required fields are marked *