ಮುಹಮ್ಮದ್ ಅಲಿ ಶೋಯಬ್: ಮುಸ್ಲಿಂ ಸಮುದಾಯದ ಸ್ವಾಭಿಮಾನ ಮತ್ತು ರಾಜಕೀಯ ಹಕ್ಕುಗಳಿಗಾಗಿ ಸಂಘಟಿತ ಹೋರಾಟ ಅನಿವಾರ್ಯ
ಬೆಂಗಳೂರು:
ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ರೂಪುಗೊಳ್ಳುತ್ತಿರುವ ರಾಜಕೀಯ ಪರಿಸ್ಥಿತಿಗಳು ಹಾಗೂ ನಿರಂತರ ಕಡೆಗಣಿಸುವಿಕೆ ಗಂಭೀರ ಹಂತ ತಲುಪಿದ್ದು, ಇದು ಕೇವಲ ಚಿಂತಾಜನಕವಲ್ಲದೆ ಸಮುದಾಯದ ಸ್ವಾಭಿಮಾನಕ್ಕೆ ನೇರ ಮತ್ತು ಸ್ಪಷ್ಟ ಸವಾಲಾಗಿದೆ ಎಂದು “ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆ” ತೀವ್ರವಾಗಿ ಅಭಿಪ್ರಾಯಪಟ್ಟಿದೆ.
ಇಂದು ಬೆಂಗಳೂರಿನಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ವಿವಿಧ ಕ್ಷೇತ್ರಗಳ ಮುಖಂಡರು, ಚಿಂತಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಿ ಸಮುದಾಯದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಗಂಭೀರ ಚರ್ಚೆ ನಡೆಸಿದರು.
ಈ ಕಾರ್ಯಕ್ರಮದಲ್ಲಿ ಮುಹಮ್ಮದ್ ಅಲಿ ಶೋಯಬ್ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಸಮುದಾಯದ ಸ್ವಾಭಿಮಾನ, ರಾಜಕೀಯ ಪ್ರತಿನಿಧಿತ್ವ ಮತ್ತು ಹಕ್ಕುಗಳ ರಕ್ಷಣೆಗೆ ಬಲಿಷ್ಠ ಸಂಘಟನೆ ಹಾಗೂ ಸಮನ್ವಯದ ಹೋರಾಟ ಅಗತ್ಯವೆಂದು ಅವರು ಒತ್ತಿ ಹೇಳಿದರು.
ಸಭೆಯಲ್ಲಿ ಮಾತನಾಡಿದ ಮುಖಂಡರು, ದೀರ್ಘಕಾಲದ ಮೌನ ಮತ್ತು ನಿರ್ಲಕ್ಷ್ಯದ ಪರಿಣಾಮವಾಗಿ ಮುಸ್ಲಿಂ ಸಮುದಾಯಕ್ಕೆ ರಾಜಕೀಯವಾಗಿ ಹಿನ್ನಡೆಯಾಗಿದ್ದು, ಅದರ ಪರಿಣಾಮವಾಗಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಸ್ಪಷ್ಟ ಅನ್ಯಾಯ ಎದುರಾಗುತ್ತಿದೆ ಎಂದು ಕಿಡಿಕಾರಿದರು.
ರಾಜಕೀಯ ಪ್ರತಿನಿಧಿತ್ವದಲ್ಲಿ ಕುಸಿತ, ಹಕ್ಕುಗಳ ನಿರ್ಲಕ್ಷ್ಯ ಹಾಗೂ ಸಮಾನ ಪಾಲಿನ ಕೊರತೆ ಈಗ ಸಹಿಸುವ ಮಟ್ಟವನ್ನು ದಾಟಿದ್ದು, ಇದಕ್ಕೆ ತಕ್ಕಂತೆ ಸಂಘಟಿತ, ಸ್ಪಷ್ಟ ಮತ್ತು ದಿಟ್ಟ ಹೋರಾಟ ಅನಿವಾರ್ಯವಾಗಿದೆ ಎಂದು ಘೋಷಿಸಲಾಯಿತು.
ಸಭೆಯಲ್ಲಿ ಕೆಲವರು ಸಮುದಾಯದೊಳಗಿನ ಅನಾವಶ್ಯಕ ಭಿನ್ನಾಭಿಪ್ರಾಯಗಳು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಮತ್ತು ಕೆಸರು ಎಸೆಯುವ ರಾಜಕೀಯ ನಿಲುವುಗಳು ನಮ್ಮ ಒಗ್ಗಟ್ಟನ್ನು ದುರ್ಬಲಗೊಳಿಸುತ್ತಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ವಿಭಜನೆಗೆ ಅವಕಾಶ ನೀಡದೆ, ಸಮುದಾಯದ ಸಮಗ್ರ ಹಿತದೃಷ್ಟಿಯಿಂದ ಏಕಮುಖವಾಗಿ ಸಾಗಬೇಕಾಗಿದೆ ಎಂದು ಕರೆ ನೀಡಲಾಯಿತು.
“ಕರ್ನಾಟಕ ಸ್ವಾಭಿಮಾನಿ ಮುಸ್ಲಿಮರ ವೇದಿಕೆ” ಈ ಹಿನ್ನಲೆಯಲ್ಲಿ ರೂಪುಗೊಂಡಿದ್ದು, ಸಮುದಾಯದ ಹಕ್ಕು, ಗೌರವ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ಒಂದು ಬಲಿಷ್ಠ, ಸಂಯೋಜಿತ ಹಾಗೂ ದಿಕ್ಕುನಿರ್ಧಾರಿತ ವೇದಿಕೆಯಾಗಲಿದೆ ಎಂದು ತಿಳಿಸಲಾಯಿತು.
ಮುಂದಿನ ದಿನಗಳಲ್ಲಿ ಸಮುದಾಯದ ನ್ಯಾಯಯುತ ಹಕ್ಕುಗಳು ಮತ್ತು ಸಮಾನ ಪಾಲು ಪಡೆಯಲು ಸ್ಪಷ್ಟ ಕಾರ್ಯಯೋಜನೆಗಳೊಂದಿಗೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ವೇದಿಕೆ ಘೋಷಿಸಿದೆ.