ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕಡತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕಡತಿಯಲ್ಲಿ ‘ನಾವು ದ್ರಾವಿಡ ಕನ್ನಡಿಗರು ಚಳುವಳಿ’ ವತಿಯಿಂದ “ಕಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿಜಯನಗರ ಜಿಲ್ಲೆಯ ಗಡಿ ಪ್ರದೇಶ ಕಲ್ಯಾಣ ಕರ್ನಾಟಕವು ರಾಜ್ಯದ ಇತರೆ ವಿಭಾಗಗಳಾದ ಕಿತ್ತೂರು ಕರ್ನಾಟಕ ಮತ್ತು ಹಳೇ ಮೈಸೂರು ಕರ್ನಾಟಕ ಸೇರುವ ಕೊಂಡಿಯಾಗಿದೆ. ಈ ಸಂಗಮದ ಬಿಂದುವು ತುಂಗಭದ್ರ ನದಿ ತೀರದಲ್ಲಿ ಬರುತ್ತದೆ. ಈ ಬಿಂದುವಿನಿಂದ ಉತ್ತರಕ್ಕೆ ಸೇವುಣರು ಮತ್ತು ದಕ್ಷಿಣಕ್ಕೆ ಹೊಯ್ಸಳರು 12ನೇ ಶತಮಾನದಲ್ಲಿ ರಾಜಪ್ರಭುತ್ವದ ಕಾರಣಕ್ಕೆ ಹಂಚಿಕೊಂಡ ನಂತರ 1956ರ ನವೆಂಬರ್ 1 ರಂದು ಸರಿಸುಮಾರು 750 ವರ್ಷಗಳ ನಂತರ ಪ್ರಜಾಪ್ರಭುತ್ವದ ದಾರಿಯಲ್ಲಿ ಒಂದಾಗುವವರೆಗೂ ಕನ್ನಡಿಗರು ವಿವಿಧ ಆಡಳಿತಕ್ಕೆ ಒಳಪಟ್ಟು ಹರಿದು ಹಂಚಿ ಹೋಗಿದ್ದರು. ವರ್ತಮಾನದಲ್ಲಿ ಭವಿಷ್ಯದಲ್ಲಿ ಪ್ರತಿಯೊಬ್ಬ ಕನ್ನಡಿಗರು ತಿಳಿದುಕೊಳ್ಳಬೇಕಾದ ಇತಿಹಾಸ ಮತ್ತು ವೀಕ್ಷಿಸ ಬೇಕಾಗಿರುವುದರಿಂದ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಿ ಎಂದು ಪ್ರವಾಸೋದ್ಯಮ ಇಲಾಖೆಗೆ ಒತ್ತಾಯಿಸಲು ಅನುಕೂಲವಾಗುವಂತೆ ಈ ಸಂಗಮದ ಬಿಂದುವಿನ ಸುತ್ತ ಮುತ್ತಲ ಪ್ರದೇಶವನ್ನು ‘ಕನ್ನಡದೂರು’ ಎಂದು ಹೆಸರಿಸಿ ಕಡತಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಬೇಕು” ಎಂದು ಮನವಿ ಸಲ್ಲಿಸಲಾಯಿತು.ಮನವಿ ಸಲ್ಲಿಸುವುದಕ್ಕಿಂತ ಮೊದಲು ಮಾತನಾಡಿದ ಬೆಂಗಳೂರು ಚೇತನ್ ರವರು ‘ಕಳೆದ 5-6 ತಿಂಗಳಿನಿಂದ ಮಂಡ್ಯ ಅಬಿ ಒಕ್ಕಲಿಗ ಮುಂದಾಳುತನದಲ್ಲಿ ಕಡತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ವಿಚಾರದ ಬಗ್ಗೆ ಅರಿವು ಮೂಡಿಸಿದ್ದು, ವಟ್ಲಹಳ್ಳಿ ಶಾಲಾ ಮಕ್ಕಳಿಗೆ ಓದುವ ಮನೆ ಕೂಡ ತೆರೆಯುತ್ತೇವೆಂದು ತಿಳಿಸಿದ್ದೇವೆ. ನಮ್ಮ ಸಂಘಟನೆ ವತಿಯಿಂದ ಇಲ್ಲಿ ಯೋಜನಾ ಅಭಿವೃದ್ಧಿ ಮತ್ತು ಜನ ಅಭಿವೃದ್ಧಿ ಎರಡು ವಿಚಾರಕ್ಕೂ ನಿರಂತರವಾಗಿ ಶ್ರಮಿಸುತ್ತೇವೆ’ ಎಂದರು. ಈ ಕಾರ್ಯಕ್ರಮದಲ್ಲಿ ಕಡತಿ ಪಂಚಾಯಿತಿ ವ್ಯಾಪ್ತಿಯ ಬೆಂಬಲಿಗರಾದ ಕರಿಬಸಮ್ಮ , ಶಿಲ್ಪಾ ಎಂ, ಸುನೀತಾ, ದುರ್ಗಮ್ಮ, ಲಕ್ಕಮ್ಮ, ಭಾಗ್ಯಶ್ರೀ, ಮಂಗಳಮ್ಮ ಅವರುಗಳು ಉಪಸ್ಥಿತರಿದ್ದು ಈ ‘ಕನ್ನಡದೂರು’ ವಿಚಾರ ಸ್ಥಳೀಯವಾಗಿ ಮತ್ತು ಇಡೀ ಕನ್ನಡನಾಡಿನ ಅಭಿವೃದ್ಧಿ ಪೂರಕ ಎಂದು ಹರ್ಷ ವ್ಯಕ್ತಪಡಿಸಿದರು. ವರದಿ ಉಮರ್ ಫಾರೂಕ್ ಸ್ಮಾರ್ಟ್ ನ್ಯೂಸ್ ಕನ್ನಡ