ಶಾಮನೂರು ಶಿವಶಂಕರಪ್ಪರಅಪ್ರತಿಮ ನಾಯಕನನ್ನ ಕಳೆದುಕೊಂಡ ದೇಶ, ಕರ್ನಾಟಕ ರಾಜ್ಯ ಬಡವಾಗಿದೆ: ಸೈಯದ್ ಖಾಲಿದ್ ಅಹ್ಮದ್ದಾವಣಗೆರೆ/ ನವದೆಹಲಿ: ನವದೆಹಲಿಯ ಭಾರತೀಯ ಯುವ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪರು ನಿಧನ ಹೊಂದಿದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ವೇಳೆ ಮಾತನಾಡಿದ ಅಖಿಲ ಭಾರತೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು ಶಾಮನೂರು ಶಿವಶಂಕರಪ್ಪರು ಕೇವಲ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಂತಿರಲಿಲ್ಲ. ದೇಶದ ರಾಜಕಾರಣದಲ್ಲಿ ಅಚ್ಚಳಿಯದ ಹೆಸರು. ಅಭಿವೃದ್ಧಿ ಕಾರ್ಯಗಳು ಅಜರಾಮರ. ಮುಂದಿನ ಪೀಳಿಗೆಯೂ ಮಾತನಾಡುವಂತ ವ್ಯಕ್ತಿತ್ವ, ಬದುಕಿದ ರೀತಿ, ಆದರ್ಶಗಳು, ಸಾಮಾಜಿಕ ಕಳಕಳಿ, ಎಲ್ಲಾ ಧರ್ಮದವರನ್ನು ಸಮಾನವಾಗಿ ಕಾಣುತ್ತಿದ್ದ ಅಪ್ರತಿಮ ನಾಯಕ. ಅವರನ್ನು ಕಳೆದುಕೊಂಡ ದೇಶ ಮತ್ತು ಕರ್ನಾಟಕ ರಾಜ್ಯವು ಬಡವಾಗಿದೆ ಎಂದು ಹೇಳಿದರು.ದಾವಣಗೆರೆ ಜಿಲ್ಲೆಯು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದೇ ಶಾಮನೂರು ಶಿವಶಂಕರಪ್ಪರ ಅಭಿವೃದ್ಧಿ, ದೂರದೃಷ್ಟಿತ್ವದ ಕಾರ್ಯಕ್ರಮಗಳು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಶಾಮನೂರು ಶಿವಶಂಕರಪ್ಪರು ಕಟ್ಟಿದ ಸಾಮ್ರಾಜ್ಯವನ್ನು ಮತ್ತೆ ಯಾರೂ ಕಟ್ಟಲು ಸಾಧ್ಯವಿಲ್ಲ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದವರಿಗೂ ನ್ಯಾಯ ಕೊಟ್ಟ ಧೀಮಂತ ನಾಯಕ ಎಂದು ತಿಳಿಸಿದರು.ಶಾಮನೂರು ಶಿವಶಂಕರಪ್ಪರ ರಾಜಕೀಯ, ಬದುಕು ನಮಗೆಲ್ಲರಿಗೂ ಆದರ್ಶ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯೋಣ. ಎಲ್ಲಾ ಪಕ್ಷದವರನ್ನು ಸಮಾನವಾಗಿ ಕಾಣುವ ಮೂಲಕ ಅಜಾತಶತ್ರುವೆನಿಸಿಕೊಂಡಿದ್ದರು. ಎಸ್. ಎಸ್. ಅವರ ಸಾವು ಬರಸಿಡಿಲು ಬಡಿದಂತಾಗಿದೆ. ದೇಶದಲ್ಲಿಯೇ ಅತಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆ ಹೊಂದಿದ್ದ ಶಾಮನೂರು ಶಿವಶಂಕರಪ್ಪರಿಗೆ ಯಾರೂ ಸಾಟಿ ಇಲ್ಲ. ರಾಜಕಾರಣದಲ್ಲಿ ಎಂದಿಗೂ ಅಧಿಕಾರ ಹುಡುಕಿಕೊಂಡು ಹೋದವರಲ್ಲ. ಅವಕಾಶಗಳು ಅವರನ್ನೇ ಅರಸಿ ಬಂದಿದ್ದವು ಎಂದು ಹೇಳಿದರು.ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ಕೋಟಿ ರೂಪಾಯಿ ಯೋಜನೆಗಳನ್ನು ತಂದು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಿದವರು. ಸ್ಮಾರ್ಟ್ ಯೋಜನೆಯಡಿ ನೂರಾರು ಕೋಟಿ ರೂಪಾಯಿ ಯೋಜನೆ ಕೈಗೊಂಡು ಸಾಕಾರಗೊಳಿಸಿದ ಧೀಮಂತ ನಾಯಕ. ಇಂದು ಅವರ ಅಗಲಿಕೆಯಿಂದ ಇಡೀ ದಾವಣಗೆರೆಯೇ ಕಂಬನಿ ಮಿಡಿಯುತ್ತಿದೆ. ಸಾವಿರಾರು ಜನರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಶ್ರುತರ್ಪಣ ಸಲ್ಲಿಸಿದ್ದಾರೆ. ಇಂಥ ನಾಯಕ ಮತ್ತೆ ಹುಟ್ಟಿ ಬರುವುದಿಲ್ಲ. ಅಷ್ಟು ಸಾಧನೆ ಮಾಡಿದವರು ಎಂದು ಹೇಳಿದರು.ದಾವಣಗೆರೆ ಮ್ಯಾಂಚೆಸ್ಟರ್ ಎಂದೇ ಪ್ರಸಿದ್ಧಿ ಆಗಿತ್ತು. ಕಾಟನ್ ಮಿಲ್ ಗಳು ಮುಚ್ಚಿದ ಸಮಯದಲ್ಲಿ ಶಾಮನೂರು ಶಿವಶಂಕರಪ್ಪರು ಬಾಪೂಜಿ ವಿದ್ಯಾಸಂಸ್ಥೆ, ಇಂಜಿನಿಯರಿಂಗ್ ಕಾಲೇಜು, ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದ ಉದ್ಯೋಗದಾತ. ಕೊಡುಗೆಗಳ ಬಗ್ಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮೃತರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ಸೈಯದ್ ಖಾಲಿದ್ ಅಹ್ಮದ್ ತಿಳಿಸಿದರು.ಈ ವೇಳೆ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ವಿವೇಕ್ ಯಾವಗಲ್, ರಂಜಿತ್, ರಾಜ್ಯ ಕಾರ್ಯದರ್ಶಿಗಳು ಮತ್ತು ಇತರರು ಹಾಜರಿದ್ದರು.