*ಹಿಜಾಬ್ ಎಳೆದ ಪ್ರಕರಣ: ನಿತೀಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹ*ಶಿವಮೊಗ್ಗ: ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಯುಷ್ ಮಹಿಳಾ ವೈದ್ಯರ ಪ್ರಮಾಣ ಪತ್ರ ವಿತರಣೆ ಸಂದರ್ಭದಲ್ಲಿ ಮಹಿಳೆಯ ಧಾರ್ಮಿಕ ವಸ್ತವಾದ ಹಿಜಾಬ್ ಅನ್ನು ಸಾರ್ವಜನಿಕ ವೇದಿಕೆಯಲ್ಲಿ ಎಳೆದು ಅವಮಾನಿಸಿದ ಘಟನೆಗೆ ಸಂಬಂಧಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಷ್ಟ್ರಪತಿಯವರನ್ನು ಆಗ್ರಹಿಸಿದೆ . ನಿತೀಶ್ ಕುಮಾರ್ ಆಯುಷ್ ಮಹಿಳಾ ವೈದ್ಯರಿಗೆ ಪ್ರಮಾಣ ಪತ್ರ ವಿತರಿಸುವ ಅಧಿಕೃತ ಕಾರ್ಯಕ್ರಮದಲ್ಲಿ, ಸಾರ್ವಜನಿಕ ವೇದಿಕೆಯಲ್ಲೇ ಮಹಿಳೆಯ ಧಾರ್ಮಿಕ ವಸ್ತವಾದ ಹಿಜಾಬ್ ಅನ್ನು ಕೈಯಿಂದ ಎಳೆದು ಅವಮಾನಿಸಿರುವ ಘಟನೆ ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ಆತಂಕವನ್ನುಂಟುಮಾಡಿದೆ. ಈ ಕೃತ್ಯವು ಭಾರತ ಸಂವಿಧಾನದ ಕಲಂ 14, 15, 21 ಮತ್ತು 25ಗಳಿಗೆ ವಿರುದ್ಧವಾಗಿದ್ದು, ಮಹಿಳೆಯ ಗೌರವ, ಸ್ವಾತಂತ್ರ್ಯ ಹಾಗೂ ಧಾರ್ಮಿಕ ಹಕ್ಕುಗಳ ಮೇಲಿನ ಗಂಭೀರ ದಾಳಿಯಾಗಿದೆ ಎಂದಿದ್ದಾರೆ. ಸಂವಿಧಾನಾತ್ಮಕ ಹುದ್ದೆಯಲ್ಲಿರುವ ವ್ಯಕ್ತಿಯಿಂದ ಇಂತಹ ನಡೆ ನಡೆದಿರುವುದು ಅತ್ಯಂತ ಖಂಡನೀಯವಾಗಿದೆ. ಭಾರತ ಧರ್ಮನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ, ಮಹಿಳೆಯ ದೇಹ, ವಸ್ತ್ರ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಕೈ ಹಾಕುವ ಯಾವುದೇ ವ್ಯಕ್ತಿ ಕಾನೂನಿನ ಮುಂದೆ ಉತ್ತರದಾಯಿಯಾಗಲೇಬೇಕು ಎಂದಿದ್ದಾರೆ. ಆದ್ದರಿಂದ ಈ ಘಟನೆಯ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು. ಸಂಬಂಧಿಸಿದ ಮಹಿಳೆಗೆ ಸಾರ್ವಜನಿಕ ಕ್ಷಮೆಯಾಚನೆಗೆ ಸೂಚಿಸಬೇಕು, ಸಂವಿಧಾನ ಉಲ್ಲಂಘನೆಯ ಹಿನ್ನೆಲೆಯಲ್ಲಿ ಅಗತ್ಯ ಕಾನೂನು ಕ್ರಮಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.